Monday 29 July 2019

Curious class room


History of jamkhandi

*ಸ್ವಾತಂತ್ರ್ಯ ಹೋರಾಟದಲ್ಲಿ ಜಮಖಂಡಿ ತಾಲೂಕಿನ ಪಾತ್ರ*

                            ಸ್ವತಂತ್ರ್ಯ ಪೂರ್ವದಲ್ಲಿ ಗ್ವಾಲಿಯರ್, ಮೈಸೂರು, ಹೈದರಾಬಾದ್, ಇಂದೋರ್, ಬರೋಡ, ಕೊಲ್ಹಾಪುರ ಇನ್ನಿತರ ಸಂಸ್ಥಾನಗಳು ಸೇರಿದಂತೆ 562 ದೇಶಿಯ ಸಂಸ್ಥಾನಗಳು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಬೆರಳೆಣಿಕೆಯ ಪ್ರತಿಷ್ಠಿತ ಸಂಸ್ಥಾನಗಳಲ್ಲಿ ಜಮಖಂಡಿ ಪಟವರ್ಧನ ಮಹಾರಾಜರ ಸಂಸ್ಥಾನವು ಒಂದಾಗಿತ್ತು. ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ನಂತರ ಪಟವರ್ಧನ ಮಹಾರಾಜರ ಇದೊಂದು ತ್ಯಾಗವನ್ನು ಭಾರತದ ಇತಿಹಾಸದ ಅಧ್ಯಯನದಲ್ಲಿ ಅತ್ಯಂತ ಸ್ಮರಣಾರ್ಥವಾಗಿ ಉಳಿಯುವಂತೆ ಜಮಖಂಡಿ ಸಂಸ್ಥಾನದವರು ಅಪ್ರತಿಮ ತ್ಯಾಗವನ್ನು ಭಾರತಕ್ಕೆ ಮೊದಲು ಸಹಿ ಮಾಡುವುದರ ಮೂಲಕ ವಿಲೀನಿಕರಣವಾಯಿತು. ಸ್ವತಂತ್ರಪೂರ್ವದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸ್ಥಾನಿಕ ಮನೆತನಗಳ ಅಧೀನದಲ್ಲಿ ಸಂಸ್ಥಾನಗಳು ರಾಜಕೀಯ ಪ್ರಾಬಲ್ಯತೆಯನ್ನು ಹೊಂದಿದವು.

*ಜಮಖಂಡಿ ಸಂಸ್ಥಾನ:-*
ಸ್ವಾತಂತ್ರ್ಯ ಪೂರ್ವ ಸಂಸ್ಥಾನಗಳಲ್ಲಿ ವಿಜಯಪುರ ಜಿಲ್ಲೆಯ ಜಮಖಂಡಿ ಮತ್ತೊಂದು ಪ್ರಮುಖ ಸಂಸ್ಥಾನಿಕ ಕೇಂದ್ರವಾಗಿದ್ದು, ಮರಾಠಿ ಪಟವರ್ಧನ್ ಮನೆತನದ ಆಳ್ವಿಕೆಯಲ್ಲಿ ದಕ್ಷಿಣ ಪ್ರಾಂತ್ಯದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 1821 ರಲ್ಲಿ ರಾಮಚಂದ್ರ ರಾವ್ ಅಪ್ಪಸಾಹೇಬ್ ಅನು ಜಮಖಂಡಿಯ ಸಂಸ್ಥಾನದ ಅಧಿಪತಿಯಾಗಿ ಬ್ರಿಟಿಷರಿಗೆ 20,848 ರೂಪಾಯಿಗಳ ವಾರ್ಷಿಕ ಕಪ್ಪವನ್ನು ನೀಡುವ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಬ್ರಿಟಿಷರ ವಿಶ್ವಾಸಕ್ಕೆ ಪಾತ್ರನಾದವನು. ಮುಂದೆ ಹಲವಾರು ಸುಧಾರಣೆಗಳಿಗೆ ಮುಂದಾದವರ ಪರಿಣಾಮವಾಗಿ ಸಂಸ್ಥಾನವು ಸಾಕಷ್ಟು ಪ್ರಗತಿ ಸಾಧಿಸಿತು. ಆದರೆ 1857 ರಲ್ಲಿ ದೇಶದಾದ್ಯಂತ ಪ್ರಥಮ ಸ್ವಾತಂತ್ರ್ಯ ಬಂಡಾಯ ಭುಗಿಲೆದ್ದ ಸಂದರ್ಭದಲ್ಲಿ ನೆರೆಯ ಮುಧೋಳ ಸಂಸ್ಥಾನದ ಹಲಗಲಿಯ ಬೇಡರು ಪಿರಂಗಿ ಸರ್ಕಾರದ ವಿರುದ್ಧ ಬಂಡಾಯ ಹೂಡಿದರು. ಈ ಸಂದರ್ಭದಲ್ಲಿ ಜಮಖಂಡಿಯಲ್ಲೂ ಅಲ್ಪಸ್ವಲ್ಪ ಬ್ರಿಟಿಷರ ವಿರುದ್ಧ ವ್ಯಂಗ್ಯ ಚಿತ್ರಣ ಕಂಡುಬಂದಿತು. ಈ ವಿರೋಧಕ್ಕೆ ಜಮಖಂಡಿ ರಾಜನೇ ಕಾರಣವಾಗಿರಬೇಕೆಂದು ಅನುಮಾನಿಸಿ ರಾಜ ಪಟವರ್ಧನವರನ್ನು ಬೆಳಗಾವಿಯ ಜೈಲಿನಲ್ಲಿ ಬಂಧನದಲ್ಲಿಡಲಾಯಿತು. ಈ ಸಮಯದಲ್ಲಿ ಜಮಖಂಡಿಯ ವಿವಿಧ ಭಾಗದಲ್ಲಿ ಜಪ್ತಿ ಹಾಗೂ ಬಂಧನಗಳಾದವು ರಾಜನ ನಿಷ್ಠಾವಂತ ಸೇನಾನಿಯಾದ ಛೋಟುಸಿಂಗನು ಜಮಖಂಡಿಯ ಗಲಭೆಗೆ ತಾನೇ ಕಾರಣ ಎಂದು ಹೇಳಿ ಬಂಧನಕೊಳಗಾದನು. ಸೆರೆಯಲ್ಲಿದ್ದ ಪಟವರ್ಧನ ನಿರಪರಾಧಿಯೆಂದು ಬಿಡುಗಡೆ ಹೊಂದಿದರು. ಚೋಟುಸಿಂಗನನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಅರಸನ ಸಲುವಾಗಿ ಪ್ರಾಣತೆತ್ತ ಚೋಟು ಸಿಂಗನ ಸಮಾಧಿಯನ್ನು ಜಮಖಂಡಿಯಲ್ಲಿ ಈಗಲೂ ನೋಡಬಹುದಾಗಿದೆ.
                                             ಬೆಳಗಾವಿಯಲ್ಲಿ ಮುಂಬಯಿ ಪ್ರಾಂತೀಯ ರಾಜಕೀಯ ಸಮ್ಮೇಳನ 1895 ರಲ್ಲಿ ಸಮಾವೇಶಗೊಂಡಿತು. ಅದರ ಅಧ್ಯಕ್ಷತೆಯನ್ನು ದಿಂಶಾ ವಾಚ ಅವರು ವಹಿಸಿದರು. ಅದಕ್ಕೆ ತಿಲಕರು ಬಂದಿದ್ದು ಜಮಖಂಡಿಯ ಪ್ರತಿನಿಧಿಗಳು ಹೋಗಿದ್ದರು 1905 ರಲ್ಲಿ ಜಯರಾವ್ ನರಗುಂದ್ ಅವರು ವಕೀಲರಾಗಿದ್ದು ಸಮಾಜಸೇವೆಯಲ್ಲಿ ಭಾಗವಹಿಸುತ್ತಿದ್ದರು, ಇವರ ರಾಷ್ಟ್ರೀಯ ಚಳುವಳಿಯ ಕೇಂದ್ರವಾಗಿತ್ತು. ಜಮಖಂಡಿಯಲ್ಲಿ ಕಾಕಾ ಕಾರಖಾನೀಸರು ಶಿಕ್ಷಣದ ಸಲುವಾಗಿ ಜಮಖಂಡಿಯಲ್ಲಿ ತಮ್ಮ ಅಣ್ಣನ ಬಳಿ ಬಂದು ನೆಲೆ ನಿಂತಿದ್ದರು. 1905 ರಲ್ಲಿ ಬಂಗಾಳ ವಿಭಜನೆಗೊಂಡಾಗ  ಬಾಗಲಕೋಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸ್ವದೇಶಿ ಚಳುವಳಿ ಬಿಸಿ ದೇಶದೆಲ್ಲೆಡೆ ಬಿಸಿ ವ್ಯಾಪಿಸಿತು. ಜಮಖಂಡಿಯವರಾದ ವಿಠ್ಠಲ್  ರಾಮಜಿ ಶಿಂಧೆ ರವರು 1906 ರಲ್ಲಿ  *"ಡಿ ಪ್ರೇಸ್ ಡ್ ಕ್ಲಾಸಸ್  ಮಿಷನ್ ಸೊಸೈಟಿ"* ಯನ್ನು ಪುಣೆಯಲ್ಲಿ ಸ್ಥಾಪಿಸಿದರು. ಇದು ಮುಂಬೈ ಕರ್ನಾಟಕದ ಮೇಲೆ ಪ್ರಭಾವ ಬೀರಿದವು.
*ಸ್ವದೇಶಿ ಚಳುವಳಿ:-*
                           ದೇಶದಲ್ಲಿ ಸ್ವದೇಶಿ ಚಳುವಳಿ ಬಿರುಸಿನಿಂದ ನಡೆದಾಗ ವಿದ್ಯಾರ್ಥಿಯಾಗಿದ್ದ ಜಮಖಂಡಿಯ ಕಾಕಾ ಕಾರಖಾನೀಸರು ಯುವ ತಂಡವನ್ನು ಕಟ್ಟಿಕೊಂಡು ಚಳುವಳಿಗೆ ಪೂರಕವಾಗಿ ಪ್ರಭಾವಬೀರಿ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದರು. ಮುಧೋಳದಲ್ಲಿನ ಗೆಳೆಯರ ಬಳಗ ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದರು *'ಮರ್ಮ ಭೇದಕ'* ಮರಾಠಿ ಪದ್ಯ ರಚಿಸಿ ಕಾಕಾ ಕಾರಖಾನೀಸರು ಹಾಗೂ ಕಾಳುಸಂತ ಕುಲಕರ್ಣಿಯವರು ಸೇರಿ ಚಳುವಳಿಗೆ ಮುಂದಾದರು. ಮುಧೋಳ ಹಾಗೂ ಜಮಖಂಡಿಯಲ್ಲಿ ಏಕಕಾಲಕ್ಕೆ ವಿದೇಶಿ ವಸ್ತುಗಳ ಬಹಿಷ್ಕಾರ ಕಾರ್ಯಕ್ರಮ ರೂಪಿಸಿದರು. 1906 ರಲ್ಲಿ ದೀಪಾವಳಿ ನರಕಚತುರ್ದಶಿಯ ಮುಂಜಾನೆಯ ಶಹರುಗಳ ನಾಗರಿಕರ ಮನೆಯ ಬಾಗಿಲ ಮೇಲೆ *"ಜಾನ್ಸನ್ ಸಕ್ಕರೆ"* ಯನ್ನು ಸೇವಿಸಬಾರದು, ಮಹಿಳೆಯರು ಸ್ವದೇಶಿ ಬಳೆಗಳನ್ನು ಧರಿಸಬೇಕೆಂದು ಒತ್ತಾಯಿಸುವ ಪ್ರಕಟನಾ ಪತ್ರಗಳನ್ನು ಅಂಟಿಸಲು ಗುಂಪುಗಳು ಮುಂದಾದವು. ಇದು ಪೇಟಿಗೆ ಸೀಮಿತವಾಗದೆ ಹಳ್ಳಿಗಳಲ್ಲಿ ಅಂದರೆ ಕಲ್ಹೋಳ್ಳಿ ವೆಂಕಟೇಶ್ವರ ಜಾತ್ರೆ ಹಾಗೂ ಬನಹಟ್ಟಿ ಜಾತ್ರೆಗಳಿಗೂ ಹಬ್ಬಿದವು.
*ಅಸಹಕಾರ ಚಳುವಳಿ:-*
                           ನಾಗಪುರ ಅಧಿವೇಶನಕ್ಕೆ ಜಮಖಂಡಿಯಿಂದ ಕಾಕಾ ಕಾರಖಾನೀಸರು ಭಾಗಿಯಾಗಿ ಅಸಹಕಾರ ಮಂತ್ರದಿಂದ ಪ್ರಭಾವಿತರಾಗಿದ್ದರು.
*ಉಪ್ಪಿನ ಸತ್ಯಾಗ್ರಹ:-*
                             ಗಾಂಧಿ ಪ್ರಾಂತವೆಂದು ಪ್ರಸಿದ್ಧವಾಗಿರುವ ಕರ್ನಾಟಕದಲ್ಲೂ ಅಂಕೋಲೆಯಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸುವುದೆಂದು ನಿರ್ಧರಿಸಲಾಯಿತು. ಹರ್ಡೀಕರರ ನಾಯಕತ್ವದಲ್ಲಿ ಜರುಗಬೇಕಿದ್ಧ ಆದರೆ ಅವರು ಬರುವುದು ವಿಳಂಬವಾದರಿಂದ ಪಿಎಮ್ ನಾಡಕರ್ಣಿ ಅವರ ಮುಂದಾಳುತ್ವದಲ್ಲಿ ಆರಂಭವಾಯಿತು. ಕಾಕಾ ಕಾರಖಾನೀಸರು ವಿವಿಧ ಪ್ರದೇಶದಲ್ಲಿ ಕಾಂಗ್ರೆಸ್ ಸಮಿತಿಯ ಸ್ಥಾಪಿಸಿ ಜನಜಾಗೃತಿ ಮೂಡಿಸಿದ ಎಂದು ಜೀವರಾಜ್ ಜೋಶಿ ತಮ್ಮ ಸ್ವತಂತ್ರ ಸ್ಮೃತಿಯಲ್ಲಿ ದಾಖಲಿಸಿದ್ದಾರೆ.
*ಅರಣ್ಯ ಸತ್ಯಾಗ್ರಹ:-*
                             ಮಳೆಗಾಲ ಆರಂಭವಾದರಿಂದ ಉಪ್ಪಿನ ಸತ್ಯಾಗ್ರಹ ಮುಂದುವರೆಯಲಿಲ್ಲ, ನಾಯಕರ ಆದೇಶದಂತೆ ಎಲ್ಲೆಡೆ ಅರಣ್ಯ ಸತ್ಯಾಗ್ರಹ ಆರಂಭವಾಯಿತು.
*ಅಸಹಕಾರ ಚಳುವಳಿ:-* 
                              ಮತ್ತೆ ಗಾಂಧೀಜಿಯವರು ಚಳುವಳಿಗೆ ಕರೆ ನೀಡಿದರು ಆದರೆ ಗಾಂಧೀಜಿಯವರನ್ನು ಬಂಧಿಸಿ ಯರವಾಡ ಜೈಲಿನಲ್ಲಿ ಇಡಲಾಯಿತು. ಈ ಸಮಯದಲ್ಲಿ ಸಿಂದಿ ಗಿಡ ನಾಶ ವಿದೇಶಿ ಚಳುವಳಿಗಳ ವಿರುದ್ಧ ಚಳುವಳಿಗಳು ನಡೆದವು. ಜಮಖಂಡಿ ವಿವಿಧ ಭಾಗಗಳಲ್ಲಿ ಅಂದರೆ ರಬಕವಿ-ಬನಹಟ್ಟಿ ಸಾವಳಗಿಯಲ್ಲಿ  1931- 32 ರಲ್ಲಿ ಅರಣ್ಯ ಸತ್ಯಾಗ್ರಹ ಬಹಳ ತುರುಸಿನಿಂದ ಜರುಗಿತು.
*ಕನ್ನಡ ಸಾಹಿತ್ಯ ಸಮ್ಮೇಳನ:-*
                         1937 ರಲ್ಲಿ ಜಮಖಂಡಿಯಲ್ಲಿ 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಬೆಳ್ಳಾವೆ ವೆಂಕಟನಾರಾಯನ ಅಧ್ಯಕ್ಷತೆವಹಿಸಿದರು.
*ವೈಯಕ್ತಿಕ ಸತ್ಯಾಗ್ರಹ:-* 
                          1939 ರಲ್ಲಿ ಎರಡನೇ ಜಾಗತಿಕ ಯುದ್ಧದ ಆರಂಭವಾದಾಗ, ಬ್ರಿಟಿಷರನ್ನು ಬೆಂಬಲಿಸುವ ಗಾಂಧೀಜಿಯವರ ಧೋರಣೆಯನ್ನು ಖಂಡಿಸಿ ಚೆನ್ನಬಸಪ್ಪ ಅಂಬಲಿ ತಮ್ಮನ ಕೈಯಿಂದ ಕಠೋರವಾದ ಪತ್ರ ಬರೆಸಿ ಗಾಂಧೀಜಿಗೆ ರವಾನಿಸಿದರು. ಇದರಂತೆ ಗಾಂಧೀಜಿಯವರು ವೈಯಕ್ತಿಕ ಸತ್ಯಾಗ್ರಹಕ್ಕೆ ಕರೆ ನೀಡಿದರು. ಅಂದರೆ 1940-41 ರಲ್ಲಿ ದೇಶದಾದ್ಯಂತ ಜರುಗಿದ ವೈಯಕ್ತಿಕ ಸತ್ಯಾಗ್ರಹದಲ್ಲಿ ಜಮಖಂಡಿ, ಬನಹಟ್ಟಿ, ರಬಕವಿ ಸಾವಳಗಿ ಗ್ರಾಮಗಳಲ್ಲಿ ಸ್ವಯಂಸೇವಕರಿಂದ ವೈಯಕ್ತಿಕ ಸತ್ಯಾಗ್ರಹ ನಡೆದೆವು. 1937-42 ರ ಅವಧಿಯಲ್ಲಿ ಕಾಕಾ ಕಾರಖಾನೀಸರು ಅಸ್ಪೃಶ್ಯತೆ  ಹಾಗೂ ಬಸವಿ ಪದ್ಧತಿ ವಿರುದ್ಧ ಪ್ರಚಾರ ಮಾಡಲು ಪ್ರವಾಸ ಕೈಗೊಂಡರು ಇದರ ಮೂಲಕ ಕೆಳವರ್ಗದ ಅಭ್ಯುದಯಕ್ಕಾಗಿ ಶ್ರಮಿಸಿದರು.
*ಚಲೇಜಾವ್ ಚಳುವಳಿ:-*
                          1942 ರಲ್ಲಿ ಭಾರತಕ್ಕೆ ಬಂದ ಕ್ರಿಪ್ಸ್ ಸಮಿತಿಯಿಂದ ಯಾವುದೇ ರೀತಿಯ ಉಪಯುಕ್ತವಾಗದಿದ್ದರಿಂದ ಜಮಖಂಡಿಯ ಕುಂಚನೂರು, ಬನಹಟ್ಟಿ, ರಬಕವಿ, ಸಾವಳಗಿ ಬಿದರಿ ಇನ್ನಿತರ ಊರುಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭೂಗತ ಚಳುವಳಿ ಕೈಗೊಂಡರು. ಸಾರ್ವಜನಿಕ ಆಸ್ತಿ ಹಾನಿ ಉಂಟುಮಾಡುವುದು ಮಾಡುವುದು ತಂತಿ ರೈಲು ಇತರೆ ಕಟ್ಟಡಗಳು ಮಾಡುವುದು ಪಟ್ಟಿಯಲ್ಲಿ ಸಾವಳಗಿಯಲ್ಲಿ ಬಂಧುಗಳನ್ನು ಕನ್ನಡದಲ್ಲಿ ಶಾಲಾ ಕಟ್ಟಡಗಳನ್ನು ಸುಡುವುದು ದಾಖಲಿಸಿದ್ದಾರೆ. ಬನಹಟ್ಟಿಯಲ್ಲಿ ಪ್ರೌಢಶಾಲಾ ಉಪಾಧ್ಯಯ ಕಲಕಂಬ ಮಾಸ್ಟರ್ ಹಾಗೂ ಅವರ ಹಿಂಬಾಲಕರು ಪ್ರಮುಖ ಪಾತ್ರವಹಿಸಿದರು. ಕಲಕಂಬ ಮಾಸ್ಟರ್ ಅವರ ನಾಯಕತ್ವದಲ್ಲಿ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಸರಸ್ವತಿಗೆ ಬದಲು ಗಾಂಧೀಜಿಯವರ ಭಾವಚಿತ್ರವನ್ನು ಬನಹಟ್ಟಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ಭಾಗದಲ್ಲಿ ಮಹದೇವಪ್ಪ ಮುರುಗೋಡ ಗುಂಪು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ ಬನಹಟ್ಟಿ ಚಾವಡಿಗೆ ದೇಶಿಯ ಬಾಂಬು ಹಾಕಿ ಸ್ಫೋಟಿಸಿತು. ಈ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಪರಯ್ಯ ಮಲಕಯ್ಯ ಬಂಗಿ ಕೂಡ ಇದ್ದದ್ದು ರೈಲ್ವೆ ನಿಲ್ದಾಣವನ್ನು ಸುಡುವ ಹಂಚಿಕೆ ಇವರದಾಗಿತ್ತು. ಮುಧೋಳ-ಜಮಖಂಡಿ, ಜಮಖಂಡಿ-ಕುಂಚನೂರ್ ನಡುವೆ ತಂತಿಯನ್ನು ಕಡಿದು ಹಾಕಿದರು ಎಂದು ಪಿವಾಯ್ ಖಾಸಗನರವರು ದಾಖಲಿಸಿದ್ದಾರೆ. ಆಲಗೂರಿನ ರವರಾದ ಎಸ್ ಪಿ ಉಪಾಧ್ಯ, ಸಾವಳಗಿಯ  ಸುರೇಂದ್ರ ನಾಂದ್ರೇಕರ, ಭೂಪಾಲ್ ನಾಂದ್ರೇಕರ, ರಾಯಪ್ಪ ಬೆಳಗಲಿ ಮುಂತಾದವರು 1949 ರಲ್ಲಿ ತುಂಗಳದಲ್ಲಿ ನಡೆದ ಜಮಖಂಡಿ ಪ್ರಜಾ ಪರಿಷತ್ ಸಭೆಯಲ್ಲಿ ಭಾಗವಹಿಸಿದರು. ಜಮಖಂಡಿಯ ಭಾಗದ ಕೆಲವು ಎಲೆಮರೆಯ ಕಾಯಿಯಂತೆ ಮಹಿಳಾ ಹೋರಾಟಗಾರ್ತಿಯರಾದ ಶ್ರೀಮತಿ ಪದ್ಮಾವತಿಬಾಯಿ ವಾಮನರಾವ ಬಿದ್ರಿ, ಗಂಗವ್ವಾ ರಾಮಪ್ಪ ಬೆಳಗಲಿ, ಸುಂದ್ರವ್ವ, ಚಂದ್ರವ್ವ, ಇನ್ನಿತರರು ಭಾಗವಹಿಸಿದರು. ಇನ್ನು ಕೆಲವು ಎಲೆಮರೆಯ ಕಾಯಿಯಂತೆ ಪುರುಷರು ಕೂಡಾ ಬಾಗಿಯಾದವರಾದ ಡಾ. ದಾಮೋದರ ರಾಮಚಂದ್ರ ಹುಲ್ಯಾಳ್ಕರ, ನಾಗಪ್ಪ ಜಕನೂರ, ನಾಗಪ್ಪ ಗುರವ, ಗಿರಿಮಲ್ಲಪ್ಪ ಹೋಸುರ, ರಾಮಬಾವು ಟಿಂಬುರಜಿ ಇತರರು  ಜಮಖಂಡಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದವರಾಗಿದ್ದಾರೆ.

                     ದೇಶಿಯ ಸಂಸ್ಥಾನಗಳ ವಿಲೀನಿಕರಣ ಕಾರ್ಯವನ್ನು ಭಾರತ ಸರ್ಕಾರ ಗೃಹ ಮಂತ್ರಿಯಾದ  ಸರ್ದಾರ್ ವಲ್ಲಭಾಯಿ ಪಟೇಲ್ ವಹಿಸಿಕೊಂಡರು. ನವಭಾರತದ ನಿರ್ಮಾಪಕರಲ್ಲಿ ಒಬ್ಬರು ಪಟೇಲರು. ಇವರು ದೇಶಿಯ ಸಂಸ್ಥಾನಗಳ ವಿಲೀನಿಕರಣದ ರೂವಾರಿಗಳಾದರು.  ಅಗಸ್ಟ್ 15 ರಂದು 1947 ರಂದು ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಾ ಗಾಂಧಿ ಹಾಗೂ ಇನ್ನಿತರ ಹೋರಾಟಗಾರು. ಒಟ್ಟಾರೆಯಾಗಿ ಜಮಖಂಡಿ ಸಂಸ್ಥಾನದವರು ಇತಿಹಾಸದ ಪುಟಗಳಲ್ಲಿ  ಪಟವರ್ಧನ್ ಮನೆತನದ ಹೆಸರು ಸ್ವಾತಂತ್ರ್ಯ ಹೋರಾಟದಲ್ಲಿ ಜಮಖಂಡಿ ತಾಲೂಕಿನ ಪಾತ್ರ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.